ಅಮೇರಿಕಾದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆದ ವಿಶ್ವ ವೀರಶೈವ ಸಮ್ಮೇಳನ ..!
ಪಕ್ಕದಲ್ಲಿ ಸದ್ದಿಲ್ಲದೇ ಹರಿಯುತ್ತಿರುವ ನದಿ , ಒಳಗಡೆ ನೋಡಿದರೆ ಎಲ್ಲೆಡೆ ಶಿವಶರಣರ ಭಾವಚಿತ್ರಗಳು, ಭವ್ಯವಾದ ಅನುಭವ ಮಂಟಪದಲ್ಲಿ ಕುಳಿತು ಶರಣರು ಮಾಡುತ್ತಿದ್ದ ಇಷ್ಟಲಿಂಗ ಪೂಜೆ , ವೇದಿಕೆ ಮೇಲೆ ವಿಶ್ವಗುರು ಬಸವಣ್ಣ,ಅಲ್ಲಮ ಪ್ರಭು,ಶರಣೆ ಅಕ್ಕ ಮಹಾದೇವಿ,ಶರಣ ಮಾದಾರ ಚೆನ್ನಯ್ಯ,ಮಡಿವಾಳ ಮಾಚಿದೇವರು,ಲಿಂಗಾಂಗ ಯೋಗಿ ಸಿದ್ಧರಾಮೇಶ್ವರ ಎಲ್ಲ ಕಾಣಿಸಿಕೊಂಡರೆ ಹೇಗಾಗಿರಬಹುದು ? ಇದೆಲ್ಲ ಕೇಳಿದೊಡೆ ಎಲ್ಲರ ಚಿತ್ತದಲ್ಲಿ ಒಮ್ಮೆಲೇ.. ವೀರಶೈವ ಧರ್ಮ ಸಂಸ್ಥಾಪಕರಲ್ಲಿ ಮುಖ್ಯರಾದ ವಿಶ್ವಗುರು ಬಸವಣ್ಣನವರ ಬಸವನ ಬಾಗೇವಾಡಿ - ಕೂಡಲ ಸಂಗಮದ ನೆನಪಾದರೆ ಅಚ್ಚರಿ ಏನಿಲ್ಲ ..
ಆದರೆ ಈ ದೃಶ್ಯ ಕಂಡು ಬಂದಿದ್ದು "ಅಂದು ೧೨ ನೇ ಶತಮಾನದಲ್ಲಿ ನುಡಿದಂತೆ ನಡೆದು ವೀರಶೈವ ಧರ್ಮ ಪ್ರಾರಂಭಿಸಿದ ವಿಶ್ವಗುರು ಬಸವಣ್ಣ ಹಾಗು ಎಲ್ಲ ಶಿವ ಶರಣರ ವಚನಗಳನ್ನು , ಜಗದೆಲ್ಲೆಡೆ ಸಾರುವ ಉದ್ದೇಶದಿಂದ" ಉತ್ತರ ಅಮೆರಿಕಾದಲ್ಲಿರುವ ವೀರಶೈವ ಸಮಾಜ ನ್ಯೂಇಂಗ್ಲಂಡ್ ಚಾಪ್ಟರ್(ಶಾಖೆ) ಜುಲೈ ೨ ಮತ್ತು ೩ , ೨೦೧೧ ರಂದು ಜ್ಞಾನ - ಕಾಯಕ - ದಾಸೋಹ - ಸಮಾನತೆಗಳನ್ನೇ ಸಮ್ಮೇಳನದ ಧ್ಯೇಯ ಮಾಡಿಕೊಂಡು ಬೋಸ್ಟನ್ ನಗರಕ್ಕೆ ಹೊಂದಿಕೊಂಡಿರುವ Newton , MA - ಚಾರ್ಲ್ಸ್ ನದಿ ತೀರದಲ್ಲಿರುವ Marriott ಹೋಟೆಲ್ನ ವಿಶಾಲವಾದ ಸಭಾಂಗಣದಲ್ಲಿ ನಡೆಸಿಕೊಟ್ಟ ೩೪ ನೇ ವಿಶ್ವ ವೀರಶೈವ ಸಮ್ಮೇಳನ ಮತ್ತು ವಿಶ್ವ ಬಸವ ಚರ್ಚಾ ಗೋಷ್ಟಿಯಲ್ಲಿ.
ಪ್ರತಿ ವರ್ಷ ನಡೆಯುವ ಉತ್ತರ ಅಮೆರಿಕಾ ವಿಶ್ವ ವೀರಶೈವ ಸಮ್ಮೇಳನ ಈ ಬಾರಿ ಬೋಸ್ಟನ್ ನಗರದಲ್ಲಿ ಪ್ರಥಮ ಬಾರಿಗೆ ಅತ್ಯಂತ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು .ಸಮಾವೇಶವನ್ನು ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಡಾ| ಶಿವಕುಮಾರ ಸ್ವಾಮೀಜಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರೆ , ಸ್ವಾಗತ ಗೀತೆಯ ನಂತರ ತರಳುಬಾಳು ಜಗದ್ಗುರುಗಳಾದ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ದೀಪ ಹಚ್ಚುವುದರೊಂದಿಗೆ ಈ ಎರಡು ದಿನದ ಕಾರ್ಯಕ್ರಮ ಆರಂಭವಾಯಿತು.
ನಂತರ ಇದೇ ಮೊದಲಬಾರಿಗೆ ನಡೆದ ವಿಶ್ವ ಬಸವ ಚರ್ಚಾ ಗೋಷ್ಟಿ ಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು , ಶ್ರೀ ಅರವಿಂದ್ ಜತ್ತಿ - ಬಸವ ಸಮಿತಿ ಅಧ್ಯಕ್ಷರು, ಶ್ರೀ ಗೊರೂರು ಚನ್ನಬಸಪ್ಪ - ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು, ಡಾ| C. ಸೋಮಶೇಖರ - ಐಎಎಸ್ , ಜಿಲ್ಲಾಧಿಕಾರಿಗಳು , ತುಮಕೂರು, Sri H. V. ನಾಗೇಂದ್ರಪ್ಪ - ಅಖಿಲ ಭಾರತ ವೀರಶೈವ ಮಹಾಸಭಾ , ಉಪಾಧ್ಯಕ್ಷರು , ಶ್ರೀ ಜರಗನಹಳ್ಳಿ ಶಿವಶಂಕರ್ - ಬರಹಗಾರರು, ಶ್ರೀ ಸುರೇಶ ಅಂಗಡಿ ,ಲೋಕಸಭಾ ಸದಸ್ಯರು, ಪ್ರಖ್ಯಾತ ಉದ್ಯಮಿ ಡಾ | ಗುರುರಾಜ್ ದೇಶ್ ಪಾಂಡೆ, ಶ್ರೀ ಜನಾರ್ಧನ ಸ್ವಾಮಿ ,ಲೋಕಸಭಾ ಸದಸ್ಯರು, Dr | ಸೋಮಶೇಖರ್ ಪಳ್ಯೇಗಾರ್ - VSNA ಪ್ರೆಸಿಡೆಂಟ್ ಇವರೆಲ್ಲ - ಬಸವ ತತ್ವ, ವೀರಶೈವ ಸಂಸ್ಕೃತಿ , ಶರಣರ ವಚನಗಳ ಬಗ್ಗೆ ಮಾತನಾಡಿದರು.
ಬಸವ ಚರ್ಚಾ ಗೋಷ್ಟಿ ಆದ ಮೇಲೆ ಈ ಕೆಳಕಂಡ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು .
- ಆರೋಗ್ಯ ಶಿಬಿರ , ಯೋಗ , ಧ್ಯಾನ ಶಿಬಿರ
- ನೃತ್ಯ , ನಾಟಕ
- ವ್ಯವಿಧ್ಯ ಮನೋರಂಜನ ಕಾರ್ಯಕ್ರಮಗಳು
- ಹಿರಿಯರ ಚರ್ಚೆಗಳು
- ವೀರಶೈವ ವಧು-ವರರ ಭೇಟಿ
- ಫ್ಯಾಶನ್ ಶೋ
- ಮಕ್ಕಳ ಸಾಂಸ್ಕೃತಿಕ ಹಾಗೂ ಮನೋರಂಜನ ಕಾರ್ಯಕ್ರಮಗಳು
- ವಿಶ್ವ ದಾಸೋಹ ದಿನಾಚರಣೆ
- VSNA got talent
- ಮಹಿಳೆಯರ ಆರೋಗ್ಯ ಶಿಬಿರ
- ಮಕ್ಕಳಿಂದ ಬಸವಣ್ಣ,ಅಲ್ಲಮ ಪ್ರಭು,ಶರಣೆ ಅಕ್ಕ ಮಹಾದೇವಿ,ಶರಣ ಮಾದಾರ ಚೆನ್ನಯ್ಯ,ಮಡಿವಾಳ ಮಾಚಿದೇವರು,ಲಿಂಗಾಂಗ ಯೋಗಿ ಸಿದ್ಧರಾಮೇಶ್ವರ ಹೀಗೆ ಹಲವಾರು ಶಿವಶರಣರ ವೇಷಧಾರಣೆ ಸ್ಪರ್ಧೆ ಎಲ್ಲರ ಮನಸೆಳೆಯಿತು.
- ಇಲ್ಲೇ ಹುಟ್ಟಿಬೆಳೆದ ಚಿಕ್ಕ ಚಿಕ್ಕ ಮಕ್ಕಳು ತಮ್ಮ ತೊದಲು ನುಡಿಯಲ್ಲೇ ಕನ್ನಡದಲ್ಲಿ ವಚನಗಳನ್ನು ಹಾಡಿ ಅವುಗಳ ಅರ್ಥವನ್ನು ಹೇಳಿದ್ದು ಎಲ್ಲರಿಗೂ ಸಂತೋಷವನ್ನು ಉಂಟು ಮಾಡಿದ್ದರೆ, ಪೋಷಕರಿಗೆ ಆನಂದಭಾಷ್ಪ ತಂದಿದ್ದರಲ್ಲಿ ಅನುಮಾನವೇ ಇಲ್ಲ!
- ಹಿರಿಯರಿಂದ ರಂಗೋಲಿ ಸ್ಪರ್ಧೆ , ಮಕ್ಕಳಿಗೆ ಚೆಸ್ ಆಟದ ಸ್ಪರ್ಧೆ
- ಚಿಕ್ಕಮಕ್ಕಳಿಗೆ ವಚನ ಹಾಡುವ ಸ್ಪರ್ಧೆ, ಶರಣರ ವೇಷಭೂಷಣ ಸ್ಪರ್ಧೆ
- ಯುವಕ-ಯುವತಿಯರಿಗೆ ಕಾಲೇಜ್ campus & cruise ಟ್ರಿಪ್
- ದೊಡ್ಡವರಿಗೆ "ಶರಣ ದಂಪತಿಗಳು" ಸ್ಪರ್ಧೆ
- ಪ್ರಖ್ಯಾತ ಜಾದುಗಾರರಾದ ಕನ್ನಡದ ಕೌಶಿಕ್ ರವರಿಂದ ಜಾದು
- ಪ್ರಖ್ಯಾತ ಹಿನ್ನೆಲೆಗಾಯಕಿಯಾದ ಶ್ರೀಮತಿ ಕಸ್ತೂರಿ ಶಂಕರ್ ರವರಿಂದ ಸುಮಧುರ ಸಂಗೀತ ಸಂಜೆ
- ಪ್ರಖ್ಯಾತ ಹಿಂದೂಸ್ತಾನಿ ವೋಕಾಲಿಸ್ಟ್ Dr|ಮೃತ್ಯುಂಜಯ ಶೆಟ್ಟರ್ - ಪ್ರಖ್ಯಾತ ಮ್ಯೂಸಿಕ್ composer ಹಾಗು ತಬಲಾ ಪಟು ಪಂಡಿತ್. ಸತೀಶ್ ಹಂಪಿಹೊಳಿ ರವರಿಂದ ಸಂಗೀತ
- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಾರರಾದ Dr|ನಾಗರಾಜ್ ಹವಾಲ್ದಾರ್ ತಂಡದಿಂದ ವಚನ ಗಾಯನ
- ಪ್ರಖ್ಯಾತ Dr|ಸತ್ಯನಾರಾಯಣರಿಂದ ನೃತ್ಯ ಥೆರಫಿ
- ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಗಣಕ ವಚನ ಸಂಗ್ರಹ - CD ರಿಲೀಸ್ - ಪ್ರಖ್ಯಾತ ಉದ್ಯಮಿ Dr|ಗುರುರಾಜ್ ದೇಶ್ ಪಾಂಡೆಯವರಿಂದ
- ಮುಂದಿನ ವರುಷ ಕೂಡಲಸಂಗಮದಲ್ಲಿ ನಡೆಯಲಿರುವ ವಿಶ್ವ ವೀರಶೈವ ಸಮ್ಮೇಳನ ೨೦೧೨ರ ಬಗ್ಗೆ ಒಂದು ಕಿರುನೋಟ - Dr| ಸೋಮಶೇಖರ್ ಪಳ್ಯೇಗಾರ್ - VSNA ಪ್ರೆಸಿಡೆಂಟ್ ರಿಂದ
- ಚಟ್ಟನಹಳ್ಳಿ ಮಹೇಶ್ ರಿಂದ ಬಸವ ಲೋಕತತ್ವದ ಬಗ್ಗೆ ವಿವರಣೆ
- ಮಾನ್ಯ ಲೋಕಸಭಾ ಸದಸ್ಯರ ಜೊತೆ ಒಂದು ಮುಕ್ತ ಸಂವಾದ
ಅಮೆರಿಕ , ಕೆನಡಾ , ಮೆಕ್ಸಿಕೋ , ಯುರೋಪ್, ಇಂಡಿಯಾ ಹೀಗೆ ಎಲ್ಲೆಡೆಯಿಂದ ನೂರಾರು ಶಿವ ಶರಣ-ಶರಣೆಯರು ಎರಡು ದಿನದ ಈ ಸಮ್ಮೇಳನಕ್ಕೆ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ , ರುಚಿ ರುಚಿಯಾದ ಕರ್ನಾಟಕದ ಪ್ರಸಿದ್ದ ಇಡ್ಲಿ- ವಡಾ , ಉಪ್ಪಿಟ್ಟು,ಕೇಸರಿಬಾತ್ ,ಹೋಳಿಗೆ , ರೊಟ್ಟಿ ಊಟ ಮಾಡಿ ಆನಂದಿಸಿದರು.
ಕೊನೆಯದಿನ ಸಂಜೆ ನಡೆದ ಮಲ್ಲಿ ಸಣ್ಣಪ್ಪನವರ ವಿರಚಿತ ಸಾಮಾಜಿಕ ನೀತಿಕತೆ ಸಾರುವ "ಅಮೇರಿಕಾದಲ್ಲಿ ಬಸವಣ್ಣ" ಎಂಬ ಹಾಸ್ಯಭರಿತ ನಾಟಕ ಎಲ್ಲರ ಮನಸೆಳೆದು ಭರ್ಜರಿ ಕರತಾಡನ ಗಿಟ್ಟಿಸಿದ್ದಲ್ಲದೆ ಬಸವಣ್ಣನವರ ಕಾಯಕವೇ ಕೈಲಾಸದ ಸಂದೇಶವನ್ನು ಎಲ್ಲರಲ್ಲಿ ಅರಿವು ಮಾಡಿಸಿದ್ದರಲ್ಲಿ ಸಂದೇಹವೇ ಇಲ್ಲ !
ಕೊನೆಗೆ ಗ್ರಾಂಡ್ ಡಿನ್ನರ್ ಆದಮೇಲೆ "ಚಿತ್ರರಂಗ ಅಂದಿನಿಂದ ಇಂದು" ಹಳೆಯ ಕಪ್ಪು-ಬಿಳುಪು ಚಿತ್ರಗಳಿಂದ ಈಗಿನ ಕಲರ್ ಫುಲ್ ಚಿತ್ರಗೀತೆಗಳಿಗೆ ಪೂರ್ಣಿಮಾ R ರವರ ತಂಡ ನಡೆಸಿಕೊಟ್ಟ ಸುಂದರ ಡಾನ್ಸ್ ಪ್ರೊಗ್ರಾಮ್ ಎಲ್ಲರಿಗೂ ಖುಷಿ ತಂದಿದ್ದಲ್ಲದೆ ವೀಕ್ಷಕರು ಸಹ ಹೆಜ್ಜೆ ಹಾಕುವಂತೆ ಮಾಡುವುದರೊಂದಿಗೆ ಈ ಸುಂದರ , ಆಕರ್ಷಕ ಸಮ್ಮೇಳನ ಮುಕ್ತಾಯವಾಯಿತು.
ಅಚ್ಚುಕಟ್ಟಾಗಿ , ಅತ್ಯಂತ ಯಶಸ್ವಿಯಾಗಿ ನಡೆದು.. ದೂರದ ಈ ದೇಶದಲ್ಲಿ ಬೆಳೆದು ನೆಲೆಸಿರುವ ಮಕ್ಕಳಲ್ಲಿ ಬಸವಣ್ಣ , ವೀರಶೈವ , ವಚನಗಳ ತತ್ವದ ಅರಿವನ್ನು ಉಂಟುಮಾಡಿದ ಈ ಸಮ್ಮೇಳನದಲ್ಲಿ ಅಧ್ಯಕ್ಷ ಬಸವರಾಜ್ ಮುದೆನುರ್ , ಉಪಾಧ್ಯಕ್ಷ ಶಿವಕುಮಾರ್ ಹಾಗು ಇತರ ಕಮಿಟಿ ಸದಸ್ಯರ, ಸ್ವಯಂ ಸೇವಕರ ಒಂದು ವರ್ಷದ ಸತತ ಪರಿಶ್ರಮ ಎದ್ದು ಕಾಣುತ್ತಿದ್ದರೆ , ತಮ್ಮ ಮಕ್ಕಳು "ಆಚಾರವೇ ಸ್ವರ್ಗ , ಅನಾಚಾರವೇ ನರಕ" ಅಂತ ಶರಣರ ವಚನಗಳನ್ನು ನುಡಿಯುವುದ ಕಂಡು ಅಪ್ಪ-ಅಮ್ಮಂದಿರಿಗೆ ಏನೋ ಒಂದು ರೀತಿಯ ಖುಷಿ , ಹಾಗು ಸಮ್ಮೇಳನದಲ್ಲಿ ಭಾಗವಹಿಸಿದ ಸಾರ್ಥಕತೆ ಎದ್ದು ಕಾಣುತ್ತಿತ್ತು.
ಸತ್ಯವ ನುಡಿವುದೆ ದೇವಲೋಕ;
ಮಿಥ್ಯವ ನುಡಿವುದೆ ಮರ್ತಲೋಕ;
ಆಚಾರವೇ ಸ್ವರ್ಗ; ಅನಾಚಾರವೇ ನರಕ
ಕೂಡಲಸಂಗಮದೇವ, ನೀವೇ ಪ್ರಮಾಣು...
- ವಿಶ್ವಗುರು ಬಸವಣ್ಣನವರು
ಜಗದೆಲ್ಲೆಡೆ ಅತ್ಯಾಚಾರ-ಅನಾಚಾರ, ಅಶಾಂತಿ , ಅರಾಜಕತೆ , ಕೊಲೆ-ಸುಲಿಗೆ ಹೀಗೆ ಹತ್ತು ಹಲವಾರು ಕಷ್ಟಗಳ ಸರಮಾಲೆಗಳೇ ತುಂಬಿ ತುಳುಕಾಡಿ ಜನರ ಸುಖ-ಶಾಂತಿ,ನೆಮ್ಮದಿಯೇ ಅಪರೂಪವಾಗಿರುವ ಈ ಆಧುನಿಕ ಕಾಲದಲ್ಲಿ, ಅಂದು ೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ನುಡಿದ ಈ ವಚನದ ತತ್ವ ನಮ್ಮೆಲ್ಲರಿಗೂ ಜೀವನದಲ್ಲಿ ಒಳ್ಳೆಯವರಾಗಲು , ನೀತಿಮಾರ್ಗದಲ್ಲಿ ನಡೆಯಲು ಮಾರ್ಗದರ್ಶಿಯಾಗಲಿ ಅಂತ ಕೂಡಲಸಂಗಮ ದೇವನಲ್ಲಿ ಬೇಡುವ ...
ಶರಣು ಶರಣಾರ್ಥಿ,
- ನಾಗರಾಜ್ .ಎಂ