ಅಮೆರಿಕಾದ ಕನ್ನೆಕ್ಟಿಕಟ್ನಲ್ಲಿ ದೀಪಾವಳಿ ೨೦೧೧ರ ಸಡಗರ !
ಗಾಳಿಯ ಬಿರುಸಿಗೆ ರಸ್ತೆಯಲ್ಲೆಲ್ಲ ಹಾರಿಬಿದ್ದ ಬಣ್ಣ ಬಣ್ಣದ (ಫಾಲ್ ಕಲರ್) ಮರಗಿಡಗಳ ಎಲೆಗಳು, ಆಗಲೇ ಚಳಿರಾಯನ ಆಗಮನದ ಮುನ್ಸೂಚನೆಯಂತೆ ಜೋರಾಗಿ ಬೀಸುತ್ತಿರುವ ಚಳಿಗಾಳಿ ...ಅಬ್ಬ ಮತ್ತೆ ಬಂತಲ್ಲಪ್ಪ ಚಳಿಗಾಲ ಎನ್ನುತ್ತಾ ಕೋಟು ಏರಿಸಿಕೊಂಡು ಸಂಸಾರದೊಂದಿಗೆ ಕಾರ್ ನಲ್ಲಿ ಹೋಗ್ತಾ ರೇಡಿಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ ನ ವೆಸ್ಟೆರ್ನ್ RAP ಮ್ಯೂಸಿಕ್ ...ಅದಕ್ಕೆ ಸರಿಯಾಗಿ ಹಿಂದೆ ಕೂತು ತಲೆ ತೂಗುತ್ತಿರೋ ಮಗರಾಯ ...ಅಂತು ಇಂತೂ ಕಾರ್ ಪಾರ್ಕ್ ಮಾಡಿ ಒಳಗೆ ಹೋದ ತಕ್ಷಣವೇ ...ಹಾ ಹಾ ..ಸುಮಧುರವಾಗಿ ಕೇಳಿ ಬರುತ್ತಿರುವ ಕನ್ನಡದ ಸುಗಮ ಸಂಗೀತದ ಅಲೆಗಳು , ನಂತರ ಕೇಳಿಬಂದ ಭೀಮಾರ್ಜುನರ ಗಡಸು ಧ್ವನಿಯ ವೀರತೆಯ ಸಂವಾದ , ಸಾವನ್ನೇ ಗೆದ್ದೇ ಎಂದು ಅಟ್ಟಹಾಸ ದಿಂದ ಅಬ್ಬರಿಸುತ್ತಿರುವ ಹಿರಣ್ಯಕಶ್ಯಪು ....ಓಹ್ ..ಇವೆಲ್ಲ ಕೇಳಿ ಎಲ್ಲೋ ಬೆಂಗಳೂರಿನಲ್ಲಿರುವ ರವೀಂದ್ರ ಕಲಾಕ್ಷೇತ್ರ ದೊಳಗೆ ಬಂದಿರೋ ತರಹ ಅನ್ನಿಸುವಂತೆ ಮಾಡಿದ್ದು.. ಈ ದೂರದ ಅಮೆರಿಕಾದಲ್ಲಿನ ಕನ್ನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ವತಿಯಿಂದ ನಡೆದ ದೀಪಾವಳಿ ೨೦೧೧ ಕಾರ್ಯಕ್ರಮ !
ಲಘು ಉಪಹಾರವಾದ ಬಳಿಕ ಸರಿಯಾಗಿ ಮಧ್ಯಾನ್ಹ ೧ ಗಂಟೆಗೆ ಪ್ರಾರ್ಥನೆಯೊಂದಿಗೆ ಆರಂಭವಾದನಂತರ ಶ್ರೀ ಯಶವಂತ್ ಗಡ್ಡಿಯವರ ನೇತೃತ್ವದಲ್ಲಿ ಕನ್ನಡದ ನಾಡಗೀತೆ ಶುರುವಾದ ತಕ್ಷಣ ಎಲ್ಲ ಹಿರಿಯರು, ಕಿರಿಯರು ಎದ್ದು ನಿಂತು ತಾವೂ ಧ್ವನಿಗೂಡಿಸಿದ್ದು ತುಂಬಾ ವಿಶೇಷವಾಗಿತ್ತು!
HKK ಅಧ್ಯಕ್ಷರಾದ ಶ್ರೀ ವೇಣು ಗುದ್ದೇರರಿಂದ ಸ್ವಾಗತ ಭಾಷಣವಾದ ಮೇಲೆ ಶ್ರೀ ಚಂದ್ರಭಟ್ ರವರ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿಯಲ್ಲಿ ಸಣ್ಣ ಸಣ್ಣ ಮುದ್ದಾದ ಮಕ್ಕಳು - ಅಣ್ಣ ಹಜಾರೆ , ಶಕುಂತಲೆ, ಘಟೋದ್ಘಜ, ಶ್ರೀ ಕೃಷ್ಣ , ಶ್ರೀ ರಾಮ , ಅಪ್ಪಟ ಭಾರತ ನಾರಿ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಫೋಷಕರ ಕಂಗಳಲ್ಲಿ ಆನಂದಭಾಷ್ಪ ಬರಿಸಿದ್ದರೆ , ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲು ಚಿಣ್ಣರ-ಕಿನ್ನರ ಲೋಕಕ್ಕೆ ಕರೆದೊಯ್ದಂತಾಗಿತ್ತು !
ಮುಖ್ಯ ಅತಿಥಿಗಳಿಂದ ಕಿರು ಭಾಷಣವಾದ ನಂತರ ಈ ಕೆಳಕಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ನೆರೆದ್ದಿದ್ದವರನ್ನು ರಂಜಿಸಿದವು ...
* ಪ್ರಿಯಾ-ಸರಿತಾ-ಸ್ವರ್ಣಾರ ಸಂಯೋಜನೆಯಲ್ಲಿ ಸುಮಾರು ಇಪ್ಪತ್ತು ಮುದ್ದಾದ ಪುಟಾಣಿಗಳು ರಂಗು ರಂಗಿನ ವೇಷದಲ್ಲಿ ಬಂದು "ಕನ್ನಡ ಮಕ್ಕಳ ಹಾಡುಗಳಿಗೆ" ಹೆಜ್ಜೆ ಹಾಕಿ ನರ್ತಿಸಿದ್ದು ಎಲ್ಲರ ಮನ ಸೆಳೆಯಿತು.
* ನಮ್ಮ ಭೂಮಿತಾಯಿ - ಜನಪದ ನೃತ್ಯ - ಶ್ರೀಮತಿ ರೂಪ ಕುಮಾರ್ ರವರ ನಿರ್ದೇಶನದಲ್ಲಿ
* ಸಾಹಸಸಿಂಹ ದಿ|ವಿಷ್ಣುವರ್ಧನ್ ನೆನಪಿಗೋಸ್ಕರ ಆಪ್ತರಕ್ಷಕ ಸಿನೆಮಾದ "ಸಿಂಹ-ಸಿಂಹ" ಹಾಡಿಗೆ ಹೆಜ್ಜೆ ಹಾಕಿದ್ದು ಅಮೆರಿಕನ್ನಡ ಶಾಲೆಯ ಹುಡುಗರು - ಶ್ರೀಮತಿ.ಅನಿತಾರವರ ನಿರ್ದೇಶನದಲ್ಲಿ
* ರಾಧೆಯ ಕೃಷ್ಣ ನೃತ್ಯ - ಶ್ರೀಮತಿ.ಪ್ರಿಯಾರವರ ನಿರ್ದೇಶನದಲ್ಲಿ
* ಶಾಂತಿ ಮಂತ್ರ - ಶಾಂತಿ ಸಮೃದ್ದಿಗಾಗಿ ಪ್ರಾರ್ಥನೆ - ಶ್ರೀಮತಿ.ಇಂದುಕಲಾ ತಂಡದಿಂದ
* ಮಾಯದಂತ ಮಳೆ ಜನಪದ ನೃತ್ಯ - ಶ್ರೀಮತಿ ಸ್ನೇಹ ಸೋಸಲೆರವರ ನಿರ್ದೇಶನದಲ್ಲಿ
* ಶಂಭೋ ಶಿವ ಸಿನೆಮಾ ನೃತ್ಯ - ಶ್ರೀಮತಿ.ಪ್ರಿಯಾರವರ ನಿರ್ದೇಶನದಲ್ಲಿ
* ಮಧುರಾಷ್ಟಕಂ - ಲಘು ಶಾಸ್ತ್ರೀಯ ನೃತ್ಯ - ಶ್ರೀಮತಿ.ರಶ್ಮಿ ಸಂಯೋಜನೆ ಹಾಗೂ ಉರ್ವಿ ಪಾಠಕ್ ನೃತ್ಯ ನಿರ್ದೇಶನದಲ್ಲಿ
* ವಿಚಿತ್ರಮಂಜರಿ - ದಿನೇಶ್ ಹಾಗೂ ಸಂಗಡಿಗರಿಂದ
* ಹೊಯ್ಸಳ ಸಾಮ್ರಾಜ್ಯದ ಬಗ್ಗೆ ಒಂದು ನೋಟ ನಿರೂಪಣೆ - ಶ್ರೀಮತಿ.ಅಂಜು ಸೋಮನಾಥ್ ರವರಿಂದ
* ತೆರೆಗಳ ಸಂಗಮ - ಗಿರೀಶ್ ನೀಲಕಂಠರಿಂದ ಮಿಮಿಕ್ರಿ
* NONSTOP ಕನ್ನಡ ಸಾಹಿತ್ಯ JALAK - ಅಮೇರಿಕಾದಲ್ಲಿ ಯಮರಾಜ ನಾಟಕದ ಖ್ಯಾತಿಯ ಮಲ್ಲಿ ಸಣ್ಣಪ್ಪನವರಿಂದ
* ಸೊಗಸಾಗಿ ಮೂಡಿಬಂದ "ಭಕ್ತ ಪ್ರಹ್ಲಾದ" ನಾಟಕ - ರಘು ಸೋಸಲೆ ಮತ್ತು ಸಂಗಡಿಗರಿಂದ
ಮಧ್ಯೆ ಚಿಕ್ಕ ವಿರಾಮದ ನಂತರ ಕನ್ನಡ ಕೂಟದ ಅಜೀವ ಸದಸ್ಯರಿಂದ ಪುಟಾಣಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಮುಗಿದಮೇಲೆ ನಡೆದ ಕಲಾಶ್ರೀ ಪ್ರೊ. ಎಸ್.ಮಲ್ಲಣ್ಣ ನವರು ನಡೆಸಿಕೊಟ್ಟ ಕನ್ನಡ ಸುಗಮ ಸಂಗೀತ ಕಾರ್ಯಕ್ರಮ ಕರ್ಣಾನಂದವಾಗಿತ್ತು. ಅವರು ಹಾಡಿದ ಅನೇಕ ಭಾವಗೀತೆಗಳು,ಹಳೇ ಚಲನಚಿತ್ರಗೀತೆಗಳು,ಜಿ.ಪಿ.ರಾಜರತ್ನಂ ರಚಿತ ಪಿ.ಕಾಳಿಂಗರಾವ್ ಹಾಡಿದ "ರತ್ನನ ಪದಗಳು" ಎಲ್ಲರನ್ನು ಭಾವುಕರನ್ನಾಗಿ ಮಾಡಿದ್ದರಲ್ಲಿ ಸಂಶಯವೇ ಇಲ್ಲ ..!
ನಂತರ.."ಮಾಗಧ" ಎಂದೇ ಹೆಸರಾಗಿದ್ದ ಜರಾಸಂಧನನ್ನು ಸತ್ಯಭಾಮೆಯಿಂದ ಪ್ರೇರಿತನಾಗಿ, ಶ್ರೀಕೃಷ್ಣನು ಪಾಂಡವರ ಸಹಾಯದಿಂದ ಹೇಗೆ ಕೊಲ್ಲುವ ಉಪಾಯ ಹೂಡುತ್ತಾನೆ ? ಎಂಬ ಈ ಕಥಾ ಪ್ರಸಂಗವನ್ನು ಮಂದಾರ ಕನ್ನಡ ಕೂಟ (NEKK ) ತಂಡದವರು ನಡೆಸಿಕೊಟ್ಟ ಕರ್ನಾಟಕದ ಪ್ರಸಿದ್ದ ಕರಾವಳಿಯ ಶ್ರೀಮಂತ ಕಲೆಯಾದ ಯಕ್ಷಗಾನ ಕಾರ್ಯಕ್ರಮ ಎಲ್ಲರ ಕಣ್ಮನ ಸೆಳೆಯಿತು. ಕರ್ನಾಟಕದಲ್ಲೇ ಅಪರೂಪವಾಗುತ್ತಿರುವ ಈ ಶ್ರೀಮಂತ ಕಲೆ ಯಕ್ಷಗಾನವನ್ನು ಉಳಿಸಲು-ಬೆಳೆಸಲು ಪ್ರಯತ್ನಿಸುತ್ತಿರುವ ಈ ತಂಡದ ಶ್ರಮ ನಿಜಕ್ಕೂ ಶ್ಲಾಘನೀಯ !
ಹೀಗೆ ಸರಿಸುಮಾರು ರಾತ್ರಿ ೮ ರತನಕ ನಡೆದ ಈ ದೀಪಾವಳಿ ಕಾರ್ಯಕ್ರಮ ಕೊನೆಗೊಂಡಿದ್ದು ಕೃಷ್ಣಮೂರ್ತಿಯವರ ವಂದನಾರ್ಪಣೆಯೊಂದಿಗೆ.
ಕೊನೆಗೆ ಭರ್ಜರಿ ಊಟ ಮಾಡಿ ಕಾರಲ್ಲಿ ಕುಳಿತಾಗ ಮತ್ತೆ ರೇಡಿಯೋದಲ್ಲಿ ಕೇಳಿ ಬಂದ ಅಬ್ಬರದ ಪಾಶ್ಚಾತ್ಯ RAP ಮ್ಯೂಸಿಕ್ ಅನ್ನು ಬಂದ್ ಮಾಡಿ ಅಲ್ಲೇ ಇದ್ದ ಹಳೇ ಕನ್ನಡ ಗೀತೆಗಳ ಡಿಸ್ಕ್ ಹಾಕ್ಕೊಂಡು ಇಂಪಾಗಿ ಬರುತ್ತಿದ್ದ Dr | ರಾಜ್ ಹಾಡಿದ ಕುವೆಂಪು ರಚಿತ "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಅಂತ ಗುನುಗುತ್ತ ಮನೆಕಡೆಗೆ ಹೊರಟಾಗ ರಾತ್ರಿ ಒಂಬತ್ತಾಗಿತ್ತು !
- ಸಿರಿ ಗನ್ನಡಂ ಗೆಲ್ಗೆ-
-ನಾಗರಾಜ್ . ಎಂ